ಶುಕ್ರವಾರ, ಸೆಪ್ಟೆಂಬರ್ 9, 2011

Article on CBI raid and arrest on Janardhanareddy

ಗಣಿ ತೋಡಿ ಗುಣಿಗೆ ಬಿದ್ದವರು:ಸಿದ್ಧಾರ್ಥ ಬರಹ
ಸಿದ್ಧಾರ್ಥ
ಮಂಗಳವಾರ, 6 ಸೆಪ್ಟೆಂಬರ್ 2011 (03:39 IST)
ಜನಾರ್ದನರೆಡ್ಡಿ

ಮೊದಲೇ ಸ್ಪಷ್ಟಪಡಿಸಿಬಿಡುತ್ತೇನೆ. ಜನಾರ್ದನರೆಡ್ಡಿಯವರ ಬಂಧನಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ, ಆಂಧ್ರಪ್ರದೇಶ ಸರ್ಕಾರದ ಮನವಿ ಮೇರೆಗೆ ಆಂಧ್ರಪ್ರದೇಶದ ನೆಲದಲ್ಲಿ ಆಗಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ನಡೆಸಿದ ತನಿಖೆಯ ಫಲಸ್ವರೂಪ ಈ ಬಂಧನ. ಅಂದರೆ ಕರ್ನಾಟಕದಲ್ಲಿ ನಡೆದಿರುವ ಅವ್ಯವಹಾರಗಳು ಈ ಬಂಧನದಿಂದ ಪ್ರತ್ಯೇಕವಾಗಿಯೇ ಉಳಿದಿವೆ. ಅಂದರೆ ಈಗ ಆಗಿರುವುದು ಆರಂಭ ಮಾತ್ರ. ಮುಂದೆ ಇದೆ ನಿಜವಾದ ಮಾರಿಹಬ್ಬ.

ಇಷ್ಟಕ್ಕೂ ರೆಡ್ಡಿಯವರ ಬಂಧನವಾಗಿರುವುದು ಏಕೆ? ಆಂಧ್ರಪ್ರದೇಶದಲ್ಲಿ ರಾಜಶೇಖರರೆಡ್ಡಿ ಸರ್ಕಾರ ಪತನಗೊಂಡ ನಂತರ ಅವರ ಮಗ ಜಗನ್ ಮೋಹನ್ ರೆಡ್ಡಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಒತ್ತಾಯ ಪಕ್ಷದ ಬಹುಸಂಖ್ಯಾತ ಸದಸ್ಯರಿಂದ ಬಂತು. ಇದನ್ನು ನಿರೀಕ್ಷಿಸದೇ ಇದ್ದ ಕಾಂಗ್ರೆಸ್ ಹೈಕಮಾಂಡ್ ಪ್ರಥಮ ಭಾರಿಗೆ ಜಗನ್ ಹಿನ್ನಲೆಯನ್ನು ಕೆದಕ ಹೊರಟಾಗ ಹಲವು ಆಶ್ಚರ್ಯಕರ ಸಂಗತಿಗಳು ಕಣ್ಣಿಗೆ ಕಾಣತೊಡಗಿದವು. ರಾಜಶೇಖರರೆಡ್ಡಿ ಅಧಿಕಾರದಲ್ಲಿದ್ದಾಗ ನಡೆಸಿದ ಅಪಾರ ಪ್ರಮಾಣದ ಭ್ರಷ್ಟಾಚಾರ ಹಾಗೂ ಅದೇ ತಾನೇ ಎದ್ದಿದ್ದ ಚೀನಾ ಬೂಮ್ ನಲ್ಲಿ ಹೇರಳವಾದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಿಸಿ ಹಲವು ಸಾವಿರ ಕೋಟಿ ರೂಪಾಯಿಗಳ ಧನವಂತರಾಗಿದ್ದರು. ಸುಮಾರು ೪೨೦೦೦ ಕೋಟಿ ಎಂದು ಅಂದಾಜು ಮಾಡಲಾಗಿರುವ ಈ ಅಕ್ರಮ ಸಂಪತ್ತಿನ ಏಕೈಕ ವಾರಸುದಾರರು ಜಗನ್‌ಮೋಹನ್‌ರೆಡ್ಡಿ ಆಗಿದ್ದರು. ರಾಜಕೀಯದಲ್ಲಿ ಅತ್ಯಾಸಕ್ತಿ ಇರಿಸಿಕೊಂಡಿದ್ದ ಜಗನ್ ಅಪ್ಪ ಮುಖ್ಯಮಂತ್ರಿಯಾಗಿ ತೆರವು ಮಾಡಿದ ಕಡಪ ಕ್ಷೇತ್ರದಲ್ಲಿ ಸ್ಪರ್ಧಿಸಿ ಲೋಕಸಭೆ ಸದಸ್ಯರೂ ಆಗಿದ್ದರು. ಅಷ್ಟೇ ಅಲ್ಲ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ ಬಹುತೇಕ ಪಕ್ಷದ ಅಭ್ಯರ್ಥಿಗಳಿಗೆ ದಾರಾಳ ಹಣಕಾಸಿನ ನೆರವು ನೀಡಿ ಅವರನ್ನು ತಮ್ಮ ಹಸ್ತಕರಂತೆ ಮಾಡಿಕೊಂಡಿದ್ದರು.

ಜಗನ್ ಪ್ರಭಾವವನ್ನು ಗುರುತಿಸಲು ಎಡವಿದ ಹೈಕಮಾಂಡ್ ಅನುಭವಿ ಸಚಿವ ರೋಷಯ್ಯರವರನ್ನು ಮುಖ್ಯಮಂತ್ರಿ ಮಾಡಿತ್ತು. ಮುಖ್ಯಮಂತ್ರಿಯ ಸ್ಥಾನದ ಕನಸು ಕಾಣುತ್ತಿದ್ದ ಜಗನ್ ಬೆಂಬಲಿಗರಿಗೆ ಇದರಿಂದ ಶಾಕ್ ಆಯಿತು. ಮುಂದಿನ ವಿದ್ಯಮಾನಗಳಲ್ಲಿ ಜಗನ್ ಮತ್ತವರ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಬಂಡೆದ್ದು ತಮ್ಮದೇ ವೈಎಸ್‌ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಹುಟ್ಟುಹಾಕಿದರು ಮರಳಿ ಚುನಾವಣೆ ಗೆದ್ದರು.ರಾಜಶೇಖರ ರೆಡ್ಡಿ

ಬಳ್ಳಾರಿ ಮಾಜಿ ಕಾನ್ಸ್ಟೇಬಲ್ ಒಬ್ಬರ ಮಕ್ಕಾಳಾಗಿದ್ದ ಜನಾರ್ದರೆಡ್ಡಿ ಸಹೋದರರು ಹೇಗೆ ರಾಜಶೇಖರ ರೆಡ್ಡಿಯವರ ಬಿಜಿನೆಸ್ ಪಾಟ್ನರ್ ಆದರು ಎಂಬ ರಹಸ್ಯ ಅವರಿಗಷ್ಟೇ ಗೊತ್ತು. ಓಬಳಾಪುರಂ ಮೈನಿಂಗ್ ಕಂಪನಿ ಹಾಗೂ ಅನಂತಪುರ ಮೈನಿಂಗ್ ಕಂಪನಿಗಳು ಎಂದು ಎರಡು ಕಂಪನಿಗಳನ್ನು ಹುಟ್ಟುಹಾಕಿ ರೆಡ್ಡಿ ಪಾಲುದಾರರು ಕರ್ನಾಟಕ ಹಾಗೂ ಆಂಧ್ರಪ್ರದೇಶಗಳೆರಡರಲ್ಲೂ ಗಣಿಗಾರಿಕೆ ನಡೆಸತೊಡಗಿದರು. ರೆಡ್ಡಿ ಸಹೋದರರಿಗೆ ಅಕ್ರಮ ಗಣಿಗಾರಿಕೆಯಲ್ಲಿ ತೊಂದರೆಯಾದಾಗಲೆಲ್ಲ ವೈಎಸ್‌ಆರ್ ಅವರ ಬೆಂಬಲಕ್ಕೆ ತಮ್ಮ ರೌಡಿ ಪಡೆಯನ್ನು ಕಳುಹಿಸತೊಡಗಿದರು. ಅಷ್ಟೇ ಅಲ್ಲ ಬ್ರಹ್ಮಣಿ ಉಕ್ಕು ಕಾರ್ಖಾನೆ ಸ್ಥಾಪನೆಗಾಗಿ ರಾಜಶೇಖರರೆಡ್ಡಿ ೧೦೭೬೦ ಎಕರೆ ಜಮೀನನ್ನು ಎಕರೆಗೆ ೧೮,೦೦೦ ರೂಗಳಂತೆ ಮಂಜೂರು ಮಾಡಿಸಿದ್ದರು.

ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿಭಾಗದಲ್ಲಿದ್ದ ಸಮೃದ್ದ ಅದಿರು ಹೊಂದಿದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶ ರೆಡ್ಡಿದ್ವಯರ ಕಣ್ಣಿಗೆ ಬಿತ್ತು. ಅದನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಬೌಂಡರಿ ಕಲ್ಲುಗಳನ್ನು ಕಿತ್ತುಹಾಕಿ ರಾಜಾರೋಷವಾಗಿ ಗಣಿಗಾರಿಕೆ ನಡೆಸಿದರು. ಕರ್ನಾಟಕ ಅಧಿಕಾರಿಗಳು ಬಂದರೆ ಇದು ಆಂಧ್ರದ ನೆಲವೆಂತಲೂ, ಆಂಧ್ರದ ಅಧಿಕಾರಿಗಳು ಬಂದರೆ ಇದು ಕರ್ನಾಟಕದ ನೆಲವೆಂತಲೂ ಸಮಜಾಯಿಸಿಕೊಡುತ್ತಾ ವರ್ಷಾನುಗಟ್ಟಲೆ ಗಣಿಗಾರಿಕೆ ನಡೆಸಿ ಕೋಟಿಗಟ್ಟಲೆ ಟನ್ ಅದಿರನ್ನು ವಿದೇಶಗಳಿಗೆ ಅಕ್ರಮವಾಗಿ ಸಾಗಿಸಿದರು. ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರದ ಯಾವತ್ತೂ ಅಧಿಕಾರಿಗಳು ರೆಡ್ಡಿ ಕಂಪನಿಗಳು ದಾರಾಳವಾಗಿ ನೀಡುತ್ತಿದ್ದ ಎಂಜಲು ಕಾಸಿನ ಆಸೆಗೆ ಬಲಿಯಾಗಿ ಅವರ ಅಕ್ರಮ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ನೆರವಾದರು.

ಬಳ್ಳಾರಿಯ ನೆಲದಲ್ಲಿ ಪತ್ರಿಕೆಯೊಂದನ್ನು ನಡೆಸಿಕೊಂಡು ಲೇವಾದೇವಿ ಸಂಸ್ಥೆ ನಡೆಸಿ ರಾಯಲ್ ಸರ್ಕಲ್ಲಿನ ವ್ಯಾಪಾರಸ್ಥರಿಗೆ ಮೀಟರ್ ಬಡ್ಡಿ ಮೇಲೆ ಸಾಲ ನೀಡುತ್ತಿದ್ದ ರೆಡ್ಡಿ ಸಹೋದರರಿಗೆ ವೈಎಸ್‌ಆರ್ ರವರ ರಾಜಕೀಯ ಬೆಂಬಲ, ಶ್ರೀ ರಾಮುಲು ಎಂಬ ಪುಡಿ ರೌಡಿಯ ತೋಳು ಬಲ ಸಿಕ್ಕಿದಾಗ ಅವರ ಸಾಮ್ರಾಜ್ಯ ಎಲ್ಲೆ ಮೀರಿ ವಿಸ್ತರಿಸತೊಡಗಿತು. ಹಲವು ಹತ್ತು ಗಣಿ ಉದ್ದಿಮೆಗಳಿಗೆ ಏನಕೇನ ಪ್ರಕಾರೇಣ ಅವರ ಕುಟುಂಬ ಒಡೆಯರಾದವು. ಗುಡಿ ಗುಡಾರಗಳೆನ್ನದೆ, ಸರ್ಕಾರಿ-ಖಾಸಗಿ ಎಂದು ತಾರತಮ್ಯ ಮಾಡದೆ, ಬೆಟ್ಟ ದಿಣ್ಣೆ ಗುಡ್ಡಗಳ ಮೋರೆ ನೋಡದೆ ತಮ್ಮ ಲೂಟಿಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಿಕೊಂಡರು. ಬಳ್ಳಾರಿಯ ಸಣ್ಣ ನ್ಯಾಯಾಲಯದಿಂದ ಹಿಡಿದು ಸುಪ್ರೀಂ ಕೋರ್ಟಿನ ತನಕ ಹಲವು ನೂರು ಮೊಕದ್ದಮೆಗಳನ್ನು ಸೃಷಿಸಿಕೊಂಡು ತಮ್ಮ ಪರ ವಾದಿಸುವ ವಕೀಲರ ಪಡೆಯೊಂದನ್ನು ಸೃಷ್ಟಿಸಿಕೊಂಡರು. ಎಷ್ಟೋ ಮಂದಿ ಗಣಿ ಮಾಲೀಕರು ಇವರ ಅಟಾಟೋಪಗಳಿಗೆ ಹೆದರಿಕೊಂಡು ಬಳ್ಳಾರಿ ಖಾಲಿ ಮಾಡಿದರು. ಬಳ್ಳಾರಿಯ ನೆಲದಲ್ಲಿ ಗಣಿಗಾರಿಕೆ ಮಾಡಿಕೊಂಡಿರಬೇಕಾದರೆ ರೆಡ್ಡಿ ಸಹೋದರರಿಗೆ ಒಂದೋ ಹಫ್ತಾ ಕೊಡಬೇಕು ಇಲ್ಲವೇ ಗಣಿ ಮಾರಿ ಹೊರಹೋಗಬೇಕೆಂಬ ಪರಿಸ್ಥಿತಿ ಉಂಟಾಗಿತ್ತು. ಅಯಾಚಿತವಾಗಿ ಅಪಾರ ಹಣ ಸಂಗ್ರಹ ಆಗುತ್ತಾ ಬಂದಂತೆಲ್ಲ ರೆಡ್ಡಿ ಸಹೋದರರ ಸಾರ್ವಜನಿಕ ಸೇವೆಯ ಹಂಬಲ ಪ್ರಕಟಗೊಳ್ಳತೊಡಗಿತು. ಮೊದಲಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಸಾಮೂಹಿಕ ಮದುವೆ, ವರಮಹಾಲಕ್ಷ್ಮಿ ಪೂಜೆಗಳಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅವರು ಕಾಂಗ್ರೆಸ್ ಪಕ್ಷದಿಂದಲೇ ತಮ್ಮ ರಾಜಕೀಯ ಪ್ರವೇಶ ಮಾಡಿದರೂ ಅಂದಿನ ಕಾಂಗ್ರಸ್ ನಾಯಕರಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಅವರ ಮಹತ್ವವನ್ನು ಅರಿತುಕೊಳ್ಳುವಲ್ಲಿ ವಿಳಂಬ ಮಾಡಿದರು.ಶ್ರೀರಾಮುಲು, ಜನಾರ್ದನ, ಕರುಣಾಕರ, ಸೋಮಶೇಖರ ರೆಡ್ಡಿ

ಆ ವೇಳೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ದಿಸಲು ಕಾಂಗ್ರೆಸ್ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಕಾಲಿಟ್ಟರು. ಅವರ ವಿರುದ್ಧ ಸ್ಪರ್ದಿಸಲು ಬಿಜೆಪಿ ಅಭ್ಯರ್ಥಿಯಾಗಿ ಸುಷ್ಮಾ ಸ್ವರಾಜ್ ಬಳ್ಳಾರಿ ನೆಲಕ್ಕೆ ಕಾಲಿಟ್ಟಾಗ ರೆಡ್ಡಿ ಸಹೋದರರು ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿ ಬಂದಿತ್ತು. ಸೋನಿಯಾ-ಸುಷ್ಮಾ ನಡುವಿನ ಈ ಐತಿಹಾಸಿಕ ಕಾಳಗ ಸುಷ್ಮಾ ಪರಾಭವದಲ್ಲಿ ಅಂತ್ಯಗೊಂಡಿತ್ತಾದರೂ ಬಳ್ಳಾರಿ ನೆಲದಲ್ಲಿ ರೆಡ್ಡಿ ಸಹೋದರರಿಗೆ ಪ್ರಬಲ ರಾಜಕೀಯ ನೆಲೆದಾಣವನ್ನು ರೂಪಿಸಿಕೊಟ್ಟಿತು. ೨೦೦೪ರ ವಿಧಾನಸಭಾ ಚುನಾವಣೆಯ ವೇಳೆಗಾಗಲೇ ರೆಡ್ಡಿ ಸಹೋದರರು ಭಾಜಪದಲ್ಲಿ ಎರಡನೆ ದರ್ಜೆಯ ನಾಯಕರಾಗಿ ಗುರುತಿಸಲ್ಪಟ್ಟರಲ್ಲದೆ ಬಿಜೆಪಿಯ ಶಾಸಕ ಬಲ ೭೦ರ ಸಮೀಪ ಬರಲು ಅವರೇ ಕಾರಣೀಭೂತರಾದರು. ಕೇವಲ ೨ವರ್ಷಗಳ ಅವಧಿಯಲ್ಲಿ ಬಳ್ಳಾರಿಯ ರಾಜಕಾರಣದ ಚಿತ್ರಣವನ್ನು ಬದಲಿಸಿದ ರೆಡ್ಡಿ ಸಹೋದರರು ಬಳ್ಳಾರಿ ನಗರಸಭೆಯಿಂದ ಹಿಡಿದು, ವಿಧಾನ ಸಭೆ, ವಿಧಾನ ಪರಿಷತ್ತ್ ಹಾಗೂ ಸಂಸತ್‌ನಲ್ಲಿ ಪ್ರತಿಷ್ಠಾಪನೆಗೊಂಡರು.

೨೦೦೪-೦೮ ದಾಸರು ಹೇಳುವಂತೆ ರೆಡ್ಡಿಗಳಿಗೆ ಸುವರ್ಣಕಾಲ. ರಾಜ್ಯದಲ್ಲಿಯೇ ಪ್ರಥಮವೆನಿಸಿದ ಕಾಂಗ್ರೆಸ್ ಜನತಾದಳ ಸಮಿಶ್ರ ಸರ್ಕಾರದ ಅವಧಿಯಲ್ಲಿ ರೆಡ್ಡಿ ಸಹೋದರರು ದಾಖಲೆ ಪ್ರಮಾಣದಲ್ಲಿ ಬೆಳೆದರು. ಹಣ, ಅಧಿಕಾರ ಹಾಗೂ ಪ್ರಚಾರ ಎಲ್ಲವನ್ನು ಸಮರ್ಥವಾಗಿ ಬೆಳಸಿಕೊಂಡು ಅಧಿಕಾರಸ್ಥರನ್ನು ಒಲೈಸುತ್ತಾ ಅಧಿಕಾರಿ, ಮಾಧ್ಯಮದವರಿಗೆ ಬಿಸ್ಕೇಟ್ ಹಾಕುತ್ತಾ ಹೇಗೆ ಪ್ರವರ್ಧಮಾನಕ್ಕೆ ಬರುವುದು ಎಂಬುದಕ್ಕೆ ರೆಡ್ಡಿ ಸಹೋದರರು ಜ್ವಲಂತ ಉದಾಹರಣೆ. ರೆಡ್ಡಿ ಸಹೋದರರಿಂದ ಉಪಕೃತರಾಗದ ರಾಜಕಾರಣಿ, ಅಧಿಕಾರಿ ಇಲ್ಲವೇ ಮಾಧ್ಯಮ ಮಿತ್ರರು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಎಷ್ಟು ಮಂದಿ ಉಳಿದಿದ್ದಾರೆ ಎಂಬುದನ್ನು ದುರ್ಬೀನು ಹಾಕಿಕೊಂಡು ನೋಡಬೇಕು. ಕುಮಾರಸ್ವಾಮಿಗೆ ೧೫೦ ಕೋಟಿ ಲಂಚ ನೀಡಿದ ವೀಡಿಯೋ ಪ್ರದರ್ಶಿಸುತ್ತೇವೆಂದು ಹೇಳಿ ವಿಶ್ವ ಮಟ್ಟದಲ್ಲೂ ಪ್ರಚಾರ ಗಿಟ್ಟಿಸಿಕೊಂಡರು, ಅಷ್ಟೇ ಹೊರತಾಗಿ ವೀಡಿಯೋ ಮಾತ್ರ ಹೊರ ಬರಲೇ ಇಲ್ಲ.

ಅಮ್ಮನಿಂದ ಆಶೀರ್ವಾದ- ಸುಷ್ಮಾ ಸ್ವರಾಜ್, ಶ್ರೀರಾಮುಲು, ಜನಾರ್ದನ ರೆಡ್ಡಿಈ ಎಲ್ಲ ರಾಜಕೀಯ ದೊಂಬರಾಟಗಳ ನಡುವೆಯೂ ರೆಡ್ಡಿ ಸಹೋದರರು ತಮ್ಮ ಅಕ್ರಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾ ನಡೆದರು. ದಾಖಲೆಗಳನ್ನು ತಿರುಚುವುದು, ಅಧಿಕಾರಿಗಳನ್ನು ಹೆದರಿಸುವುದು, ಇತರರ ಜಮೀನುಗಳನ್ನು ಬಲಾತ್ಕಾರವಾಗಿ ಕಬ್ಜಾ ಮಾಡಿಕೊಂಡು ಗಣಿಗಾರಿಕೆ ನಡೆಸುವುದು. ರಾಜಧನ ನೀಡದೆ ರಾಜಾರೋಷವಾಗಿ ಅಕ್ರಮ ಸಾಗಣೆ ನಡೆಸುವುದು. ಬೇನಾಮಿ ವ್ಯವಹಾರ, ರಫ್ತು ವ್ಯವಹಾರದ ಎಲ್ಲಾ ನಿಯಮಗಳನ್ನು ಉಲ್ಲಂಘಿಸುವುದು, ತಮಗೆ ಮಣಿಯದ ಅಧಿಕಾರಿಗಳನ್ನು ಒಕ್ಕಲೆಬ್ಬಿಸುವುದು, ತಮಗೆ ಬೇಕಾದ ಅಧಿಕಾರಿಗಳನ್ನು ಪ್ರತಿಷ್ಠಾಪಿಸಿಕೊಳ್ಳುವುದು... ಹೀಗೆ ರೆಡ್ಡಿಯವರೆಂದರೆ ಬಳ್ಳಾರಿ, ಬಳ್ಳಾರಿ ಎಂದರೆ ರೆಡ್ಡಿ ಎಂಬಂತಾಯಿತು.

ರೆಡ್ಡಿ ಕುಟುಂಬದವರ ಅಕ್ರಮ ಗಣಿಗಾರಿಕೆಯ ಬಗ್ಗೆ ವಿವರಗಳನ್ನು ತಮ್ಮ ವರದಿಯ ಹತ್ತು ಅಧ್ಯಾಯಗಳಲ್ಲಿ ಹಿಡಿದಿಟ್ಟಿರುವ ಲೋಕಾಯುಕ್ತರು ಹೇಳುವಂತೆ ಬಳ್ಳಾರಿಯ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಯಾವುದೇ ಕಾಯ್ದೆ ಕಾನೂನು ಇಲ್ಲ, ಅಲ್ಲಿರುವುದು ಒಂದೇ ರೆಡ್ಡಿ ಕಾನೂನು. ಅಲ್ಲಿ ರೆಡ್ಡಿಯೇ ಸರ್ವಸ್ವವೂ. ಬೇರೆ ಸರ್ಕಾರಕ್ಕೆ ಅಲ್ಲಿ ಜಾಗವೇ ಇಲ್ಲ. ರೆಡ್ಡಿ ಕುಟುಂಬದ ರಾಜಕೀಯ ವಿರೋಧಿಗಳು ಬಳ್ಳಾರಿಯ ನೆಲದ ಮೇಲೆ ಕಾಲಿಡಲು ಕೂಡ ಹತ್ತು ಬಾರಿ ಯೋಚಿಸಬೇಕಾಗಿತ್ತು.

ಹೀಗೆ ಬೆಳೆದು ಬಂದ ರೆಡ್ಡಿ ಹಣದ ಪ್ರಭಾವವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತು. ೨೦೦೮ರ ವಿಧಾನಸಭಾ ಚುನಾವಣೆಗಳಲ್ಲಿ ಈ ಉತ್ತರ ಕರ್ನಾಟಕ ಭಾಗದ ೬೦ಕ್ಕೂ ಹೆಚ್ಚು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆರಿಸುವಲ್ಲಿ ರೆಡ್ಡಿಗಳದೇ ಅಂತಿಮ ಮಾತು. ಪ್ರಚಾರಕ್ಕೆ ಅವರದೇ ಹಣ. ಹಳ್ಳಿ ಹಳ್ಳಿಗಳಲ್ಲು ಸಾವಿರ ರೂಪಾಯಿಗಳ ಕೆಂಪು ನೋಟುಗಳು ಸುಲಲಿತವಾಗಿ ಹರಿದಾಡತೊಡಗಿದವು. ಓಟಿಗಿಷ್ಟು ಎಂದು ಹಣ ನಿಗದಿಯಾಗಿ ತೆರಬೇಕಾಗಿ ಬಂದದ್ದು ಈ ಚುನಾವಣೆಯಲ್ಲಿಯೇ.

ಅಂತೂ ಇಂತೂ ೨೨೪ ಸದಸ್ಯರ ಪೈಕಿ ಬಿಜೆಪಿ ಪಕ್ಷಕ್ಕೆ ೧೧೦ ಸದಸ್ಯರನ್ನು ಗೆಲ್ಲಿಸಿಕೊಡುವಲ್ಲಿ ರೆಡ್ಡಿ ಸಹೋದರರ ಪಾಲು ಅತೀ ಮಹತ್ವದ್ದು. ೨೦೦೮ರ ಚುನಾವಣೆಯ ನಂತರ ಮೊದಲ ಬಾರಿ ಅಧಿವೇಶನ ಸೇರಿದಾಗ ಅಂದಿನ ಪ್ರತಿ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಡಿದ ಮಾತುಗಳು ಅತ್ಯಂತ ಮಾರ್ಮಿಕವಾಗಿತ್ತು. ಈ ಚುನಾವಣೆಯಲ್ಲಿ ಕೆಂಪು ನೋಟುಗಳ ಭರಾಟೆ. ಅದು ಎಲ್ಲಿಂದ ಬಂದಿತೋ ಗೊತ್ತಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಕೆಂಪು ನೋಟುಗಳು ಹರಿದಾಡುತ್ತಿದ್ದವು. ಅದೇನು ಗಣ್ಯಾಗಿಂದ ಬಂದರೆ ನೋಟುಗಳು ಕೆಂಪಾಗುತ್ತವೋ ಗೊತ್ತಿಲ್ಲ. ಈ ಕೆಂಪು ನೋಟುಗಳ ಹಾವಳಿಯಲ್ಲಿ ನಾವೆಲ್ಲರೂ ಗೆದ್ದು ಬರುವುದೇ ಸಾಹಸವಾಗಿತ್ತು.

ಅಂತೂ ಇಂತೂ ಸ್ಥಾಪನೆಯಾದ ಬಿಜೆಪಿ ಸರ್ಕಾರಕ್ಕೆ ರೆಡ್ಡಿ ಸಹೋದರರೇ ಸೂತ್ರಧಾರರು. ಮುಖ್ಯಮಂತ್ರಿ ಕೂಡ ಆಸೆ ಆಮಿಷಗಳಿಗೆ ತಕ್ಕಂತೆ ಇಚ್ಚಾನಿಚ್ಚೆಗಳಿಗೆ ಅನುಗುಣವಾಗಿ ಅಧಿಕಾರ ನಡೆಸತೊಡಗಿದರು. ಸುಷ್ಮಾ ಸ್ವರಾಜ್ ರವರ ಆಶೀರ್ವಾದಗಳೊಂದಿಗೆ ಆಯಕಟ್ಟಿನ ಖಾತೆಗಳನ್ನು ಪಡೆದು ರಾರಾಜಿಸತೊಡಗಿದರು. ಜನಾಗ್ರಹಕ್ಕೆ ಮಣಿದು ಅಕ್ರಮ ಗಣಿ ವ್ಯವಹಾರಗಳಿಗೆ ಕಡಿವಾಣ ಹಾಕಲೆತ್ನಿಸಿದ ಯಡಿಯೂರಪ್ಪನವರನ್ನು ಶೋಭಾ ಕಾರಣ ಮುಂದಿಟ್ಟುಕೊಂಡು ಹಣಿದರು. ವಿಧಾನ ಮಂಡಲವಂತೂ ರೆಡ್ಡಿಗಳ ಆರ್ಭಟಕ್ಕೆ ಮೂಕ ಸಾಕ್ಷಿಯಾಗಿ ನಲುಗಿತು. ಅವರಾಡಿದ ಒಂದು ಮಾತು ಬಳ್ಳಾರಿಯ ತನಕ ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಕಾರಣವಾಯಿತು.

ಅಂತೂ ಇಂತೂ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಹೊರಬಂದು ಯಡಿಯೂರಪ್ಪ ಅಧಿಕಾರ ತ್ಯಜಿಸಲೇಬೇಕಾಗಿ ಬಂದಾಗ ರೆಡ್ಡಿ ಸಹೋದರರು ನಿರ್ಗಮಿಸಲೇಬೇಕಾಯಿತು. ಅಧಿಕಾರ ವಂಚಿತರಾಗಿ ಸುಮ್ಮನೇ ಕೂರುವ ಜಾಯಮಾನದವರಲ್ಲ ರೆಡ್ಡಿ ಬ್ರದರ‍್ಸ್. ಅತ್ತ ಬಿಜೆಪಿಯಲ್ಲಿ ಒತ್ತಡದ ರಾಜಕಾರಣ ಮಾಡುತ್ತಿದಂತೆ ಇತ್ತ ಜೆಡಿಎಸ್ ನೊಂದಿಗೆ ಸೀಟು ಹಂಚಿಕೆಯ ಚೌಕಾಸಿ ವ್ಯವಹಾರ ಆರಂಭಿಸಿದ್ದರು. ತಮ್ಮ ರಾಜಕೀಯ ಚದುರಂಗದಾಟದ ಮೊದಲ ದಾಳವಾಗಿ ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಸ್ವಾಭಿಮಾನಿ ಯಾತ್ರೆಯ ಹವಣಿಕೆಯಲ್ಲಿದ್ದಾಗಲೇ ಸಿಬಿಐ ಜನಾರ್ದನರೆಡ್ಡಿಯ ಬಂಧನಕ್ಕೆ ಬಲೆ ಬೀಸಿ ಯಶಸ್ವಿಯಾಯಿತು.

ರಾಜ್ಯದ ಹಿರಿಯ ರಾಜಕಾರಣಿಯೊಬ್ಬರು ಹೇಳುತ್ತಿದ್ದ ಒಂದು ಮಾತು ಪದೇ ಪದೇ ನೆನಪಿಗೆ ಬರುತ್ತದೆ. ಹಣ ಇದ್ದವರೆಲ್ಲ ರಾಜಕಾರಣ ಮಾಡಲು ಸಾಧ್ಯವಿಲ್ಲ ಹಾಗಿದ್ದರೇ ಟಾಟಾ ಬಿರ್ಲರೇ ಈ ನಾಡಿನ ಪ್ರಧಾನಿ, ರಾಷ್ಟ್ರಾಧ್ಯಕ್ಷರಾಗುತ್ತಿದ್ದರು.

ಆದರೇ ಹಣ ಇಲ್ಲದವರು ಅಕ್ರಮ ರೀತಿಯಲ್ಲಿ ಹಣ ಗಳಿಸಿ ಚುನಾವಣೆಯಲ್ಲಿ ನೀರಿನಂತೆ ಚೆಲ್ಲಿ ಅಧಿಕಾರ ಗಳಿಸಿಕೊಂಡು ರಾಜಕಾರಣ ಮಾಡಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ ಸ್ವಯಂ ರೆಡ್ಡಿ ಸಹೋದರರು.

ಪುಟದ ಮೊದಲಿಗೆ
Votes: 12 Rating: 4.67
ಸ್ವಾಮಿ ಯಾವುದೇ ರಾಜಕೀಯ ಪಕ್ಷ ಬರಲಿ, ಹೋಗಲಿ ಒಂದು ಮಾತ್ರ ಸತ್ಯ ಎಲ್ಲರೂ ನಮ್ಮನ್ನ್ನ ಅಳುವವರೇ. ನೆನಪಿರಲಿ ರೆಡ್ದಿಗಳು ಅಸ್ತಿತ್ವಕ್ಕೆ ಬರಲು ಕಾಂಗ್ರೆಸಿನ ದುರ್ಬಲ ಆಡಳಿತವೇ ಕಾರಣ. ದಯವಿಟ್ಟು ಬಳ್ಳಾರಿಯ ನಿಜವಾದ ಅಸ್ತಿತ್ವ ನೋಡಬೇಕಾದರೆ ರೆಡ್ಡಿಗಳೋ ಅಥವಾ ಮತ್ಯಾರದೋ ಕಡೆ ನೋಡೋದು ಅಲ್ಲ, ಗಡಿ ಭಾಗದಲ್ಲಿರುವ ಹಳ್ಳಿಗಳಿಗೆ ಹೋಗಿ ನರಕ ದೃಶ್ಯಗಳು ಕಾಣುತ್ತವೆ. ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಇಲ್ಲದೆ ಇರುವುದು, ಯಮಲೋಕಕ್ಕೆ ಹೋಗಲು ಮಾರ್ಗದರ್ಶಿ ಯಾಗಿರುವ ರಸ್ತೆಗಳು, ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲದ ಶಾಲೆಗಳು, ಚಿಕಿತ್ಸೆ ನೀಡದ ಸರ್ಕಾರೀ ಆಸ್ಪತ್ರೆಗಳು. ಈ ಸ್ಥಿತಿ ಕಾಂಗ್ರೆಸ್ಸನ ಆಡಳಿಥವಧಿಯಿಂದ ಹಿಡಿದು ಬಿಜೆಪಿ ಉಗಮ ಮತ್ತು ನಂತರವೂ ಮುಂದುವರೆದಿದೆ. ಕಾಂಗ್ರೆಸ್ಸ್ನೋರು ಆಳಿಹೊದ್ರು. ಬಿಜೆಪಿ ರು ಹೂತುಹಾಕಿದ್ರು ಅಧಿಕಾರಿಗಳು ತಿನ್ದುಹೂದ್ರು ಇಲ್ಲಿಯ ಜನರು ನಿದ್ದೆಗೆ ಹೋದ್ರು ಬರಹಗಾರರು ಕೆಲ್ಸಗಿಟ್ಟಿಸಿಕೊಂಡ್ರು ಚಾನೆಲ್ದವರು TRP ಹೆಚಿಸ್ಕೊಂಡ್ರೂ ಬಳ್ಳಾರಿ ಇಷ್ಟೇನೇ. ನಮಗೆ(ಬಳ್ಳಾರಿ ಜನರಿಗೆ) ಯಾವಾಗಲು ಈ ಕಷ್ಟನೇ. ಚಾಂದ್- ಅಗಸನೂರು....
On a general note, there are three aspects to life, a) immediate pleasure, b) flourishing, and c) metaphysical. A chunk of society gives lot of importance to immediate pleasure, and that's the cause behind corruption. People want fast money, fame, etc , however, when the wind of truth blows on this, everything will be destroyed soon. Flourishing is, something like a person gains by doing his duty/real work, whatever the outcome is, he enjoys this- a slow, consistent progressive path. Metaphysical one is known and well discussed. -D.M.Sagar...
Swamy ellaru kallare. avrreela undu hodaru kondu hodar. ivaru swalp kootuu hogiddar. neeve heli yaru uttam anta....
iಸಿದ್ದಾರ್ಥ ಅವರನ್ನು ಟೀಕಿಸುವ ಪ್ರತಿಕ್ರಿಯೆ ಓದಿದೆ.ಮೊದಲೇ ಏಕೆ ಲೇಖನ ಬರೆದಿಲ್ಲ ಅನ್ನುವ ವಾದ ಒಪ್ಪಬೇಕಿಲ್ಲ. ಕಾರಣ ಒಂದು ಲೇಖನ ಕಾನೂನಿಗೆ ಪೂರಕವಾಗಿರಬೇಕು .ಅಲ್ಲದೆ ಸಾಮಾಜಿಕ ಕಳಕಳಿಯನ್ನು ತೋರುವಂತಿರಬೇಕು ಅಷ್ಟೇ.ಅವ್ರು ತಡವಾಗಿ ಬರೆಯುವ ಹಿನ್ನಲೆ ಆಧರಿಸಿ ನಿಮಗೇ ಸಂದೇಹ ಇದ್ದರೆ ಅದರ ಸಾಧಕ ಬಾಧಕ ಕುರಿತಾದ ಲೇಖನ ಬರೆದರೆ ಉಪಯೋಗ ಆಗುತ್ತೆ.ಸಿದ್ಧಾರ್ಥ ಬರೆದಿರುವ ಲೇಖಾನ ಮೆಚ್ಚುವಂತಹದ್ದು....
ಇದೆಲ್ಲ ಸರಿ. ಎಲ್ಲರಿಗೆ ಗೊತ್ತಿರುವ ಸಮಾಚಾರವೇ. ನೀವು ಕಾಂಗ್ರೆಸ್ಸಿನ ಹುಳುಕನ್ನು ಮುಚ್ಚಲು ಏಕೆ ಪ್ರಯತ್ನಿಸುತ್ತೀರಿ. ರಾಜಶೇಖರರೆಡ್ಡಿಯ ಅಕ್ರಮಗಳು ಅವರಿಗೆ ಗೊತ್ತಿರಲಿಲ್ಲವೇ, ಗೊತ್ತಿದ್ದೂ ಸುಮ್ಮನಿದ್ದುದಕ್ಕೆ ಕಾರಣ ಸೋನಿಯಾ ಅವರಿಗೆ ಮಾಮೂಲಿ ಹೋಗುತ್ತಿದ್ದುದೇ? ಜಗನ್ ಮುಖ್ಯಮಂತ್ರಿಯಾಗ ಬಯಸುವವರೆಗೆ ಕಾಂಗ್ರೆಸ್ಗೆ ಇದೆಲ್ಲ ಗೊತ್ತೇ ಇರಲಿಲ್ಲವೇ? ಅನಾಮಧೇಯ ರೆಡ್ಡಿಗಳ ರೆಕ್ಕೆ ಬಲಿಯಲು ನಿಜವಾದ ನೀರೆರೆದದ್ದು ಕಾಂಗ್ರೆಸ್ನ ಮುಖ್ಯಮಂತ್ರಿ. ಫಲಾನುಭವಿಯಾದದ್ದು ಬಿಜೆಪಿ. ಈಗ ಇಬ್ಬರೂ ರೆಡ್ಡಿಗಳನ್ನು ಬಿಟ್ಟರು. ವರಲಕ್ಷಮಿಯಲ್ಲಿ ಸೀರೆಕೊಂಡೊಯ್ಯುತ್ತಿದ್ದ ಅಮ್ಮ , ಮಾಸಿಕ ದೇಣಿಗೆ ಪಡೆಯುತ್ತಿದ್ದ ಬಿಜೆಪಿ ವರಿಷ್ಟರು ಎಲ್ಲರೂ ಈಗ ಮಾನವಂತರು. ರಾಜಕೀಯ ಲೇಖನ ಬರೆಯುವವರು ಒಂದು ಪಕ್ಷದ ವಕ್ತಾರಿಕೆ ಮಾಡಬಾರದು - ಜಯರಾಮ ರೆಡ್ಡಿ...
Re: ದಯಮಾಡಿ ನಿಮ್ಮ ಕೊಪವನ್ನು ರಾಷ್ಟ್ರಘಾತುಕತನದ ಕೃತ್ಯ ಎಸಗಿದವರ ಬಗ್ಗೆ ತೋರಿರಿ. ಸಾಮಾನ್ಯವಾಗಿ ದುಷ್ಟ ಜೀವಿಗಳು ಬಲೆಗೆ ಬಿದ್ದ ಮೇಲೆ ಚೆರ್ಚೆ ನಡೆಯುತ್ತವೆ. ಪ್ರಶ್ನೆ ರೆಡ್ಡಿಗಳು ಮುಗ್ದರು ಅನ್ನೋದಾದರೆ ನೀವೊಂದು ಲೇಖನ ಬರೆದು ಉಪಕಾರ ಮಾಡಿ.
"a very informative and objective write-up. And timely too" ಇಷ್ಟು ಹೊತ್ತು ಎಲ್ಲಿ ಇಲ್ಲಿದ್ದಿರಿ ಸ್ವಾಮೀ ? ಮೊದಲು ಯಾಕೆ ಈ ಲೇಖನವನ್ನು ಬರೆದಿಲ್ಲ ?...
Re: ರಾವಣನ ಸ೦ಹಾರ ಆಗುವ ಮುನ್ನ ರಾಮಾಯಣ ಬರೆಯಲಾಗದು. ಬರೆದರೂ ಆ ರಾಮಾಯಣ ಅರ್ಥವಾಗುವುದು ಕಷ್ಟ.
avaru yadeyurppana panu.adannu bittu ulidaddara kuritu sumsru sari breyuttare.-manu...
Sri Siddharth, a very informative and objective write-up. And timely too. Thanks. kvtirumalesh...
Thanks Siddhartha for a well rounded article. S.RAO...
Never too late. But why don't you write on RB(your fellow journalist) who is a best friend of Reddys, and Sriramalu..and his empire in Padmanabha Nagara....
@ಬಳ್ಳಾರಿ ರೈತ : ಸ್ವಾಮಿ ತಾವು ಇದನ್ನೆಲ್ಲಾ ನೋಡ್ತಾ ಕೂತಿದ್ರಾ, ಇಲ್ಲಿರುವ ಸ್ಥಳಿಯರಿಗೆ ದೊಷಿಷಬೇಕು ಮೊದಲು ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂತಿದ್ರಲ್ಲ!!...
Re: ಆಗಿದ್ದ ಮೇಲೆ ವಿಧಾನ ಸೌಧದಿಂದ ಕೇವಲ ಕೆಲವೇ ಕಿಲೋಮೀಟರು ಸುತ್ತಳತೆಯಲ್ಲಿದ್ದ ಘನ ಬುದ್ಧಿವಂತರು ಭೂ ಕಬಳಿಕೆ ಬಗ್ಗೆ ಏನೂ ಮಾದಲಿಲ್ಲವಲ್ಲಾ @ರೈತರೇ
ಸಂಡೂರಿನ ಘೋರ್ಪಡೆ ಸಾಹೇಬರು ಮಾಡಿದ್ದೂ ಇದನ್ನೇ ಅಲ್ವಾ? ಸಭ್ಯ ಮುತ್ಸದ್ದಿ ಅಂತೆಲ್ಲಾ ಕರೆಸಿಕೊಂಡ ಮಾಜಿ ಉಪಮುಖ್ಯಮಂತ್ರಿ ಪ್ರಕಾಶ್ ಅವರ ಮಗ ಕೂಡ ಮಾಡಿದ್ದು ಇದನ್ನೇ ಅಲ್ವಾ? ಗೌಡ ಫಾದರ್ ಅಂಡ್ ಸನ್ಸ್ ರಿಯಲ್ ಎಸ್ಟೇಟ್‌ನಲ್ಲಿ ಗಳಿಸಿದ್ದು ಎಷ್ಟು ಕೋಟಿ?...
Re: ನಿಜ. ಆದ್ರೆ ಅವರು ಒಂದೆರಡು ಬಾವಿ ಮೊಗೆದು ಕುಡಿದಿರಬಹುದು. ಸೆಟಲೈಟ್ ಗೂ ಗೊತ್ತಾಗುವಷ್ಟು ಕದಿಯಬಾರದಿತ್ತಲ್ಲವೇ?
ಇದನ್ನು ಓದಿ ರಶೀದ್: http://www.nytimes.com/2011/09/05/technology/naming-names-on-the-internet.html...
ಅಂತೂ ಇಂತೂ ೨೨೪ ಸದಸ್ಯರ ಪೈಕಿ ಬಿಜೆಪಿ ಪಕ್ಷಕ್ಕೆ ೧೧೦ ಸದಸ್ಯರನ್ನು ಗೆಲ್ಲಿಸಿಕೊಡುವಲ್ಲಿ ರೆಡ್ಡಿ ಸಹೋದರರ ಪಾಲು ಅತೀ ಮಹತ್ವದ್ದು.. This is totally wrong.. BJP Face nodi Yaru Vote Madilla mindi it.. and Reddy's Money indha Govt Bandhidhe andree This totally wrong..(Meaning Media peoples ge Money kotti Reddy ne E-type helisidhane..) 1. Election Commisioner Very strict officer , above 10 Lakhs Amt spend mado agilla antha conditions ithu, 2. 2008 Election Time nalli Normal peoples above 1 lakhs amount carry madoke kasti ithu, anthdralli Reddygallu Red colour gari gari note kodoke hogi above 10 crores ballery nalli Sease agidhu, 3. BJP ge hege vote banthu andree mindi it.. 1992 Babri masidhi case indha Hindhutva name mele 40 seats banthu, 1996 & 1998 elections aste, but 2004 election ge Vajapaiee Name mele 69 seats banthu, but 2008 Election 110 Seats baroke BS yeddurappa Name & (Devegowda Family BSY Cheat madidhe antha) Vote bandhidhe.. Mindi it.. but Reddy money indha bandidhree, useless MLA's 10 to 15 MLA idru irbodhu.. after Operation BJP & 5 Independance MLA's Money kodthivi antha karkondu bandhu Money kodadalle Minister madirodhu saku hogi antha rowdisum madirodhu.. minid it ma.....
Oops here we are discussing black money, illegal activities.. Why are we trying to bring in TATA and BIRLAS? With all due respect to T & B 's If the administration were to be in their hands, we would have definitely seen a better India by now!...
"ಕೆಂಡಸಂಪಿಗೆಯಲ್ಲಿ ಒಂದನ್ನು ಗಮನಿಸಿದ್ದೇನೆ: ಯಾವುದೇ ಲೇಖನ ಪ್ರಕಟವಾದರೂ ಅದಕ್ಕೊಂದಾದರೂ ಅವಹೇಳನದ ಪ್ರತಿಕ್ರಿಯೆ ಇದ್ದೇ ಇರುತ್ತದೆ!" ಅವಹೇಳನೆ ಅಲ್ಲ ಸಾರ್/ಮೇಡಂ! ತಪ್ಪು ಅರ್ಥ ಮಾಡಿಕೊಂಡು ವಿಶಾದಿಸಬೇಡಿ. ನೀವೇ ಹೇಳಿ ಈ ಲೇಖನ ರೆಡ್ಡಿಗಳು ಅಧಿಕಾರದಲ್ಲಿದ್ದಾಗ ಯಾಕೆ ಬರಲಿಲ್ಲ ಅಂತ? ರೆಡ್ಡಿ ಪತನದ ನಂತರ ಅವರನ್ನು ದೂರುವುದು ಸುಲಭ. ಅದನ್ನು ಯಾರು ಮಾಡಬಹುದು. ಆದರೆ ಅಧಿಕಾರದಲ್ಲಿರುವವರನ್ನು ಎದುರು ಹಾಕಿಕೊಳ್ಳುವುದು ಕಷ್ಟ. ಅದಕ್ಕೆ ಅಲ್ಲವೆ ಅಣ್ಣಾ ಹಝಾರೆ ಧೀಮಂತ ಅಂತ ಅನ್ನಿಸಿಕೊಳ್ಳುವುದು. ಸಮಾಧಾನದಿಂದ ಯೋಚಿಸಿ, ಪ್ರತಿಕ್ರಿಯಿಸಿ....
Re: ದಯಮಾಡಿ ಗಮನಿಸಿ-ಅಣ್ಣಾ ಹಜ್ಯಾರೆ ಸಹ ಅಂದು ಇಂದಿಗೂ ನಿರ್ಧಿಷ್ಟ ದುಷ್ಟರ ಬಗ್ಗೆ ಚಕಾರ ಎತ್ತಿಲ್ಲ. ಅವರೇನಿದ್ದರೂ ನವ ನೀತಿ ಹೇಳುತ್ತಿದ್ದಾರೆ. ಆದ್ದರಿಂದ ಅವರೂ ಸಹ ಹಿಂದೆ ನಿಂತು ಹೋರಾಡುವವರ ನಾಯಕರಷ್ಟೇ
ಕರ್ಣಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದದ್ದೆ ಇಂತಹಾ ಕಳ್ಳ ಕದೀಮರ ಹಣದಿಂದ...
Re: HDK bandiddu kooda ivara duddindale.. ellaroo kallaru
Dhanyavada'galu. Visthaara varadhi chennagide... REDDY'gala bagge sampoorna maahiti ide..uttama baraha... aadre Lokayuktha varadhi yalli innu halavu Gani dhani,,Gani dhani'galige,,Ganigaarike'ge sahakarisida Prabhaavi Rajakarani'gala hesaru idhe alva...avara bagge sampoorna varadi yaavaga?......naavu kaatura'dinda kaayutiddeve....
ಬಳ್ಳಾರಿ ಹೊಸಪೇಟೆ ಹೊಂಡಗಳಿಂದ ತುಂಬಿವೆ. ಪರಿಸರಕ್ಕೇ ಬಹುದೊಡ್ಡ ಹಾನಿ ಆಗಿದೆ. ಈಗ ಈ ಕೆಟ್ಟು ಹೋದ ಼ಪರಿಸರವನ್ನು ಯಾರು ರಿಪೇರಿ ಮಾಡುತ್ತಾರೆ ? ತೋಳಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು! ಇಷ್ಟು ಹೊತ್ತು ಎಲ್ಲಿ ಇಲ್ಲಿದ್ದಿರಿ ಸ್ವಾಮೀ ? ಮೊದಲು ಯಾಕೆ ಈ ಲೇಖನವನ್ನು ಬರೆದಿಲ್ಲ ? ............. ಬಳ್ಳಾರಿ ರೈತ...
Re: Ella odugarigu nimma anisike artha aguthe. Lekhana bhidi maha rayare! Namma sarakara illiyavaregu sagani thinnutha iththe!
Re: ಯಾವುದೇ ಲೇಖನ ಪ್ರಕಟವಾದರೂ ಅದಕ್ಕೊಂದಾದರೂ ಅವಹೇಳನದ ಪ್ರತಿಕ್ರಿಯೆ ಇದ್ದೇ ಇರುತ್ತದೆ!
Re: That depicts the whole Indian society!, nobody is concerned about truth.-Sagar
adella irli, avru haNa yellittiddare heLi saaku...! - Khan...
ಈ ಲೇಖನವನ್ನು ರೆಡ್ಡಿಗಳು ಅಧಿಕಾರದಲ್ಲಿರುವಾಗಲೇ ಬರೆಯಬಹುದಿತ್ತಲ್ಲ! ಇದೆಂಥ ಧೀಮಂತಿಕೆ?!!...
Re: kannadigaru swamy, self-deprecation is our trait..
Re: ಬಹುಶಃ ಆಗ ನೀವು ಓದಲು ಹೆದರುತ್ತಿದ್ದಿರಿ. ಮಾನ್ಯ ಹೆಗ್ಗಡೆ ದಿನವಹಿ ಮಾಹಿತಿ ಕೊಟ್ಟರು ಆಗ ನೀವು ಓದಿ ಪ್ರತಿಕ್ರಿಯಿಸಬೇಕಿತ್ತು
Re: You comment about the writer!!!! What have YOU done!?
Re: I commend him for writing a detailed article. As Sagar mentioned earlier, this is the situation of our society. If not their own safety, journalists have to be concerned with the safety of their family...not fair to make silly comments!
Re: ಕೆಂಡಸಂಪಿಗೆಯಲ್ಲಿ ಒಂದನ್ನು ಗಮನಿಸಿದ್ದೇನೆ: ಯಾವುದೇ ಲೇಖನ ಪ್ರಕಟವಾದರೂ ಅದಕ್ಕೊಂದಾದರೂ ಅವಹೇಳನದ ಪ್ರತಿಕ್ರಿಯೆ ಇದ್ದೇ ಇರುತ್ತದೆ!

ಶುಕ್ರವಾರ, ಸೆಪ್ಟೆಂಬರ್ 2, 2011

My new article in Kendasampige.com

ದಾರಿ ಯಾವುದಯ್ಯಾ ಕರುನಾಡಿಗೆ?:ಸಿದ್ಧಾರ್ಥ ಕೇಳಿರುವ ಪ್ರಶ್ನೆ
ಸಿದ್ಧಾರ್ಥ
ಶುಕ್ರವಾರ, 2 ಸೆಪ್ಟೆಂಬರ್ 2011 (04:49 IST)

ಅತ್ತ ನೂತನ ಮುಖ್ಯಮಂತ್ರಿ ಸದಾನಂದಗೌಡರು ದೇವಾಲಯ ಭೇಟಿ, ಅಭಿನಂದನಾ ಸಮಾರಂಭಗಳಲ್ಲಿ ಮುಳುಗಿ ಹೋದಂತೆ, ಮಾಜಿ ಮುಖ್ಯಮಂತ್ರಿಗಳಿಬ್ಬರೂ ತಮ್ಮ ಮೇಲಿನ ಕ್ರಿಮಿನಲ್ ಪ್ರಕರಣಗಳ ಸಂಬಂಧದಲ್ಲಿ ಕೋರ‍್ಟ್ ಬಾಗಿಲು ಎಡೆತಾಕುತ್ತಿರುವಂತೆ, ೧೨ ದಿನಗಳ ಉಪವಾಸದ ನಂತರ ಅಣ್ಣಾ ಹಜಾರೆ ಮರಳಿ ಸ್ವಗ್ರಾಮದತ್ತ ಅಭಿಮುಖವಾಗುತ್ತಿದಂತೆ, ಇತ್ತ ಬಡತನವನ್ನು ಭರಿಸಲಾಗದೆ, ತಿನ್ನಲು ಕೂಳಿಲ್ಲದೆ ನಿರುದ್ಯೋಗಿ ಪುರುಷನೊಬ್ಬ ತನ್ನ ಹಸುಗೂಸನ್ನು ಮಾರಿಕೊಂಡ ಮನ ಕಲುಕುವ ಪ್ರಸಂಗ ಮುಖ್ಯಮಂತ್ರಿಯ ತವರೂರಿನಿಂದ ವರದಿಯಾಗಿದೆ. ಹಾಸನ ಮೂಲದ ಕೃಷಿಕ ದಂಪತಿಗಳು ಮಂಗಳೂರಿಗೆ ವಲಸೆ ಬಂದು ಅಲ್ಲಿಯೂ ಕೆಲಸ, ಕೂಳು ಸಿಗದೆ ಹತಾಶರಾಗಿ ಮಗುವನ್ನು ಮಾರುವಂತಹ ಪ್ರಸಂಗದಿಂದ ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತಾಗಬೇಕು. ಬಡವರ ಉದ್ಧಾರಕ್ಕೆಂದೇ ಕೇಂದ್ರ-ರಾಜ್ಯ ಸರ್ಕಾರಗಳ ಪೈಪೋಟಿ ಮೇಲೆ ಕೋಟ್ಯಂತರ ರೂಪಾಯಿ ವೆಚ್ಚಮಾಡುತ್ತಿದ್ದರೂ, ಅದು ತಲುಪಬೇಕಾದವರಿಗೆ ತಲುಪದೇ ನಡುದಾರಿಯಲ್ಲಿಯೇ ದುರ್ವ್ಯಯ ವಾಗುತ್ತಿದೆ, ಸೋರಿ ಹೋಗುತ್ತಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನಾ ಪಟ್ಟಿಯನ್ನು ಅವಲೋಕಿಸಿದರೆ ಕಾಣುವುದು ಕೇವಲ ಶೂನ್ಯ ಮಾತ್ರ. ಎಲ್ಲಾ ರಂಗಗಳಲ್ಲೂ ಆಡಳಿತದ ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ಕಣ್ಣಿಗೆ ಕಾಣುವಷ್ಟು ಡಾಳವಾಗಿದೆ. ಅಧಿಕಾರಿ ವರ್ಗಕ್ಕೆ ಸಾರ್ವಜನಿಕ ಕೆಲಸವೆಂದರೆ ಅಲರ್ಜಿ, ಸ್ವಂತಕೆಲಸವೆಂದರೆ ಆಪ್ಯಾಯಮಾನವೆಂದಾಗಿದೆ. ಬಡಜನರ ಉದ್ದಾರದ ಹೆಸರಿನಲ್ಲಿ ರೂಪಿಸಿದ ಎಷ್ಟೋ ಯೋಜನೆಗಳು ಸೋರಿಕೆಯಿಂದಾಗಿ ತಮ್ಮ ಉದ್ದೇಶ ಸಾಧನೆಯಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ತುಂಬಾ ಮುತುವರ್ಜಿಯಿಂದ ತಂದ ಉದ್ಯೋಗ ಖಾತ್ರಿ ಕಾಯ್ದೆಯ ವೈಪಲ್ಯವಂತೂ ಲಕ್ಷ ಕೋಟಿ ರೂಪಾಯಿ ಅಪವ್ಯಯದ ನಂತರವಷ್ಟೇ ಸಾರ್ವಜನಿಕರ ಕಣ್ಣಿಗೆ ಎದ್ದು ಕಾಣುತ್ತಿದೆ. ಕಾಗದದ ಮೆಲೆಯೇ ಅದೆಷ್ಟೋ ಕಾಮಗಾರಿಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಮುಗಿಸಲಾಗಿದೆ. ಅದೆಷ್ಟೋ ಸಾವಿರ ಕೋಟಿ ರೂಪಾಯಿಗಳು ಅಸಂಖ್ಯಾತ ಭ್ರಷ್ಟರ ಉದ್ದಾರದಲ್ಲಿ ವಿನಿಯೋಗವಾಗುತ್ತಿದೆ.

ಉದ್ಯೋಗ ಖಾತ್ರಿ ಯೋಜನೆ ಒಂದರಲ್ಲೇ ಹಣದುರುಪಯೋಗ, ಅವ್ಯವಹಾರ ಪ್ರಕರಣಗಳ ಒಟ್ಟು ೧೬ ಸಾವಿರ ಪ್ರಕರಣಗಳ ಎರಡು ವರ್ಷಗಳಲ್ಲಿ ದಾಖಲಾಗಿವೆ. ೪೮ ಗ್ರಾಮ ಪಂಚಾಯತ್‌ಗಳ ಅದ್ಯಕ್ಷರೂ ಸೇರಿದಂತೆ ೧೮೯ ಮಂದಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ೨೫೬ ಉದ್ಯೋಗಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದ್ದು, ೧೫೭ ಸರ್ಕಾರಿ ನೌಕರರನ್ನು ಅಮಾನತ್ತಿನಲ್ಲಿಡಲಾಗಿದೆ, ಸರಿ ಸುಮಾರು ೪೦೦೦ ಕೋಟಿ ರೂಪಾಯಿ ದುರುಪಯೋಗ ನಡೆದಿದೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ವಾಸ್ತವವಾಗಿ ದುರುಪಯೋಗ ಪ್ರಕರಣಗಳು ಇನ್ನೂ ಜಾಸ್ತಿಯೇ ಇರಲು ಸಾದ್ಯವಿದೆ. ಈ ಕಾಯ್ದೆ ಜಾರಿಯಲ್ಲಿ ಭ್ರಷ್ಟ್ಟಾಚಾರ ನಡೆದಿರುವ ಬಗ್ಗೆ ಸತತ ದೂರುಗಳು ಬರುತ್ತಿದ್ದರೂ ಸರ್ಕಾರ ಕುರುಡಾಗಿ, ಕಿವುಡಾಗಿ ವರ್ತಿಸುತ್ತದಲ್ಲದೇ, ಅಧಿಕಾರಿಗಳು ಸಲ್ಲಿಸುವ ಸುಳ್ಳು ಅಂಕಿ ಸಂಖ್ಯೆಗಳನ್ನು ಕೇಂದ್ರಕ್ಕೆ ರವಾನಿಸಿ ಅಲ್ಲಿನವರ ಕಣ್ಣಿಗೆ ಮಂಕುಬೂದಿ ಎರಚಲು ಪ್ರಯತ್ನಿಸಿತು ಎಂಬುದು ಅತ್ಯಂತ ನೋವಿನ ಸಂಗತಿ.

ಇದು ಕೇವಲ ಒಂದು ಉದಾಹರಣೆಯಷ್ಟೆ. ಮಂತ್ರಿ ಮಾನ್ಯರಿಂದ ಅದ್ಭುತವಾದ ಭ್ರಷ್ಟಾಚಾರ, ಸಾರ್ವಜನಿಕ ಹಣ ಲೂಟಿ ಇಡೀ ಸರ್ಕಾರದ ಯಂತ್ರಕ್ಕೆ ವ್ಯಾಪಿಸಿದ್ದು, ಅಧಿಕಾರಿಶಾಹಿ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ.Accountability ಹಾಗೂ sense of responsibility ಎರಡೂ ಮರೆಯಾಗುತ್ತಿದೆ. ೨೦೦೯-೧೦ ವರ್ಷವೊಂದರಲ್ಲೇ ಕೇಂದ್ರ ಸರ್ಕಾರದಿಂದ ಅನುದಾನವಾಗಿ ಬಂದ ೧೧,೮೭೮ ಕೋಟಿ ರೂಪಾಯಿ ನೆರವನ್ನು ವಿನಿಯೋಗಿಸದೆ, ವಾಪಸ್ಸು ನೀಡಬೇಕಾಗಿ ಬಂದದ್ದು ಅಧಿಕಾರಿಗಳ ಅದಕ್ಷತೆಗೆ ಕನ್ನಡಿ ಹಿಡಿದಂತಿದೆ. ಹಣವೇ ಇಲ್ಲದೇ ನೀರಾವರಿ ಯೋಜನೆಗಳು ಸೊರಗುತ್ತಿರುವಾಗ ಕೇಂದ್ರ ಸರ್ಕಾರ ನೀಡಿದ್ದ ೧೦೦೦ ಕೋಟಿ ರೂಪಾಯಿ ಅಧಿಕಾರಿಗಳ ನಿರ್ಲಕ್ಷದಿಂದ ಹಿಂತಿರುಗಿತು. ಕಾಮಗಾರಿಗಳನ್ನು ಯಾರು ನಿರ್ವಹಿಸಬೇಕು ಎಂಬ ತಾಕಲಾಟದಲ್ಲಿಯೇ ವರ್ಷ ಕಳೆದ ಪೌರಾಡಳಿತ ಇಲಾಖೆ ೨೨೫ ಕೋಟಿ ರೂಪಾಯಿ ಅನುದಾನವನ್ನು ವ್ಯರ್ಥ ಮಾಡಿಕೊಂಡಿತು. ಖಾಸಗಿ ಕಾಲೇಜುಗಳನ್ನು ಅನುದಾನ ಸಂಹಿತೆ ವ್ಯಾಪ್ತಿಗೆ ತರುವ ವಿಷಯದಲ್ಲಿ ರಾಜ್ಯ ಸರ್ಕಾರ ಅನುಸರಿಸಿದ ವಿಳಂಬ ನೀತಿಯಿಂದಾಗಿ ೩೦೦ ಕೋಟಿ ರೂ ಮುಟ್ಟುಗೋಲಾಯಿತು.
ವಾಸ್ತವಿಕ ಸಾಮರ್ಥ್ಯಕ್ಕಿಂತಲೂ ದೊಡ್ಡ ಪ್ರಮಾಣದ ಅಂದಾಜು ನಮೂದಿಸಿ (inflated budget) ಬಜೆಟ್ ಇಡುವ ಸಂಪ್ರದಾಯ ಯಡಿಯೂರಪ್ಪನವರಿಂದಲೇ ಆರಂಭವಾಯಿತು. ದಿನೇ ದಿನೇ ಬಜೆಟ್‌ನಲ್ಲಿ ಅಂದಾಜು ಜಾಸ್ತಿಯಾಗುತ್ತಾ ಹೋಯಿತೇ ಹೊರತಾಗಿ ಆ ಅಂದಾಜಿಗೆ ಅನುಗುಣವಾಗಿ ತೆರಿಗೆ/ಸಂಪನ್ಮೂಲಗಳ ಸಂಗ್ರಹಣೆಯಲ್ಲಿ ಆಗಬೇಕಾದ ಹೆಚ್ಚಳ ಸಾಧ್ಯವಾಗಲಿಲ್ಲ. ಪರಿಣಾಮ ವರ್ಷೆ ವರ್ಷೆ ವಿತ್ತೀಯ ಕೊರತೆಯ ಪ್ರಮಾಣ ಏರುತ್ತಿದ್ದು ಈ ವರ್ಷ ಅದು ೧೨,೮೪೮ ಕೋಟಿ ರೂಪಾಯಿ ಮುಟ್ಟುವ ಅಪಾಯವಿದೆ.

ರಾಜಸ್ವ ಸಂಗ್ರಹಣೆಯಲ್ಲಿ ವಿಫಲಗೊಂಡ ರಾಜ್ಯ ಸರ್ಕಾರ ನಿರ್ವಹಣೆಯ ಸಲುವಾಗಿ ಕೇಂದ್ರದ ಅನುದಾನಕ್ಕೆ ಕೈಚಾಚಬೇಕಾದ ಪರಿಸ್ಥಿತಿ ಇದೆ. ಜೊತೆಗೆ ಅಪಾರ ಪ್ರಮಾಣದ ಸಾಲಗಳನ್ನು ಎತ್ತಿ ಸರ್ಕಾರ ನಡೆಸುವಂತಾಗಿದೆ. ೨೦೦೪-೦೫ ರಲ್ಲಿ ೪೦ ಸಾವಿರ ಕೋಟಿ ರೂಪಾಯಿಗಳಷ್ಟಿದ್ದ ಸಾಲದ ಪ್ರಮಾಣ ಇದೀಗ ೧ ಲಕ್ಷ ಕೋಟಿಯ ಗಡಿಯನ್ನು ದಾಟಿದೆ.
ಬಿಜೆಪಿ ಸರ್ಕಾರ ಬಂದಾಗಿನಿಂದ ಇದುತನಕ ೪೦ ಸಾವಿರ ಕೋಟಿ ಸಾಲವನ್ನು ಪಡೆಯಲಾಗಿದೆ. ಇದರಲ್ಲಿ ಶೇ ೮೦ ರಷ್ಟು ಸಾಲವನ್ನು ಶೇ ೮ ರಿಂದ ೧೦ ಬಡ್ಡಿ ದರದ ಮೇಲೆ ಪಡೆಯಲಾಗಿದ್ದು, ಕೇವಲ ಬಡ್ಡಿ ಪಾವತಿಗಾಗಿಯೇ ನಾವು ವರ್ಷಂ ಪ್ರತಿ ೧೦ ಸಾವಿರ ಕೋಟಿ ರೂಪಾಯಿ ತೆರಬೇಕಾಗಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಸಂಬಳ, ಸವಲತ್ತುಗಳನ್ನು ಮೂರು ವರ್ಷದಲ್ಲಿ ಎರಡು ಬಾರಿ ಪರಿಷ್ಕರಿಸಲಾಗಿದ್ದು(ಪ್ರತಿ ೫ ವರ್ಷಕ್ಕೊಮ್ಮೆ ವೇತನ ಶ್ರೇಣಿ ಪರಿಷ್ಕರಣೆ ನಡೆಯಬೇಕು ಆದರೆ ಇಲ್ಲಿ ಮೂರನೆ ವೇತನ ಪರಿಷ್ಕರಣಾ ಸಮಿತಿ ಈಗಾಗಲೇ ಕಾರ್ಯಾರಂಭ ಮಾಡಿದೆ) ೧೮೦೩೪ ಕೋಟಿ ಸಂಬಳ ಹಾಗೂ ೬೫೭೦ ಕೋಟಿ ನಿವೃತ್ತಿ ವೇತನವಾಗಿ ನೀಡಲಾಗುತ್ತಿದೆ. ಸರ್ಕಾರದ ಅನುತ್ಪಾದಕ ವೆಚ್ಚಗಳೂ ಹೆಚ್ಚಾಗುತ್ತಿದ್ದು ಭಾಗ್ಯಲಕ್ಷ್ಮಿ, ಸೈಕಲ್ ವಿತರಣೆಯಂತಹ ಜನಪ್ರಿಯ ಯೋಜನೆಗಳ ಅನುಷ್ಠಾನದಿಂದಾಗಿ ವರ್ಷಂಪ್ರತಿ ೨೫೦-೩೦೦ ಕೋಟಿ ರೂಪಾಯಿ ಅಧಿಕಾರಸ್ಥರ ಖಾಸಗಿ ತಿಜೋರಿ ಸೇರುತ್ತಿದೆ. ಸುವರ್ಣ ಭೂಮಿ ಯೋಜನೆಯಲ್ಲಿ ಬಿಜೆಪಿ ಪರ ರೈತರಿಗೇ ಮೊದಲ ಮಣೆ. ಇಂತಹ ಜನಪ್ರಿಯ ಯೋಜನೆಗಳ ಮೇಲಿನ ವೆಚ್ಚ ಹೆಚ್ಚಿದಂತೆಲ್ಲ ಆದ್ಯತಾ ವಲಯದ ಯೋಜನೆಗಳು ಹಣವಿಲ್ಲದೆ ಸೊರಗುತ್ತಿವೆ. ತೆರಿಗೆ ಸಂಗ್ರಹಣೆಯಲ್ಲಿ ಅಧಿಕಾರ ವೃಂದ ವಿಫಲವಾಗಿದ್ದು, ೨೦೧೦ ರ ವೇಳೆಗೆ ತೆರಿಗೆ ಬಾಕಿಯ ಮೊತ್ತ ೧೦ ಸಾವಿರ ಕೋಟಿ ರೂಪಾಯಿ ಮೀರಿದೆ. ಇದರ ಜೊತೆಗೆ ಸರ್ಕಾರವೇ ಜಾಮೀನಾಗಿ ನಿಂತು ಕೊಡಿಸಿರುವ ಸಾಲ ಸುಮಾರು ೬೦ ಸಾವಿರ ಕೋಟಿ ಗುರಿದಾಟಿದೆ. ಇದರ ಜೊತೆಗೆ ರಾಜ್ಯ ಸರ್ಕಾರವೇ ಸಾಕುತ್ತಿರುವ ಸಾರ್ವಜನಿಕ ಉದ್ದಿಮೆಗಳೆಂಬ ಬಿಳಿಯಾನೆ ಸಂಸ್ಥೆಗಳಲ್ಲಿ ೮೦ ಸಾವಿರ ಕೋಟಿ ರೂಪಾಯಿ ಸಾರ್ವಜನಿಕರ ಹಣ ತೊಡಗಿಸಲಾಗಿದ್ದು ಇದರಿಂದ ವರ್ಷಂಪ್ರತಿ ಬರುತ್ತಿರುವ ವರಮಾನ ಕೇವಲ ೧ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ. ೧೦೫ ರಷ್ಟಿದ್ದ ಸಾರ್ವಜನಿಕ ಉದ್ದಿಮೆಗಳನ್ನು ೮೦ ಕ್ಕೆ ಇಳಿಸಲಾಗಿದೆ ಯಾದರೂ ಈ ಪೈಕಿ ೭೨ ಉದ್ದಿಮೆಗಳು ಸತತವಾಗಿ ನಷ್ಟ ಅನುಭವಿಸುತ್ತಿರುವ ದಾಖಲೆಯನ್ನು ಸ್ಥಾಪಿಸಿವೆ. ಇಷ್ಟಾಗಿಯೂ ಈ ನಿಗಮ/ಉದ್ದಿಮೆಗಳನ್ನು ಮುಚ್ಚಲು ಸರ್ಕಾರಕ್ಕೆ ನೂರಾರು ಅಡ್ಡಿ-ಆತಂಕಗಳು. ಬೆಂಗಳೂರಲ್ಲಿ ಸಾವಿರಾರು ಖಾಸಗಿ ಐಟಿ ಕಂಪನಿಗಳು ಯಶಸ್ವಿಯಾಗಿ ೪೦ ಸಾವಿರ ಕೋಟಿ ರೂಪಾಯಿಗಳಷ್ಟು ವರಮಾನ ತಂದುಕೊಟ್ಟರೆ, ನಮ್ಮ ಸರ್ಕಾರದ ಸಂಸ್ಥೆಯಾದ ಕಿಯೋನಿಕ್ಸ್ ಸತತ ೧೭ ವರ್ಷಗಳಿಂದ ನಷ್ಟದಲ್ಲಿಯೇ ನಡೆದಿದೆ. ಲಾಭಗಳಿಸಬೇಕಾದ ಮಾರಾಟ ಸಂಸ್ಥೆಗಳು, ವಿತ್ತೀಯ ನಿಗಮಗಳು ಸೋರಿಕೆ ಸೇರಿದಂತೆ ನಾನಾ ಕಾರಣಗಳಿಂದಾಗಿ ನಿರೀಕ್ಷಿತ ಲಾಭ ಮಾಡದೇ ಹೋದರೆ, ಸಾರ್ವಜನಿಕ ಹಿತಾಸಕ್ತಿಗೆಂದೇ ಸ್ಥಾಪಿಸಲ್ಪಟ್ಟ ರಸ್ತೆ ಸಾರಿಗೆ ಸಂಸ್ಥೆಗಳು, ವಿದ್ಯುಚ್ಛಕ್ತಿ ನಿಗಮಗಳು ಕ್ಷುಲ್ಲಕ ಕಾರಣಗಳಿಂದಾಗಿ ದರ ಏರಿಕೆ ಮಾಡುತ್ತಾ ಕೋಟಿ ಕೋಟಿ ರೂಪಾಯಿ ಲಾಭ ತೋರಿಸುತ್ತಾ ಸಾರ್ವಜನಿಕರ ಶೋಷಣೆಯಲ್ಲಿ ತೊಡಗಿವೆ. ಇವುಗಳು ದಾಖಲೆ ಲಾಭ ಮಾಡುವ ಅಗತ್ಯವಿಲ್ಲ ನಷ್ಟವಾಗದಂತೆ ದರವನ್ನು ಏರುತ್ತಿರುವ ವೆಚ್ಚಕ್ಕೆ ಸರಿದೂಗಿಸಿಕೊಂಡರೆ ಸಾಕು. ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಕೂಡ ಅದೇ ಆಗಿದೆ ಎಂಬ ಸಾಮಾನ್ಯ ಜ್ಞಾನ ಕೂಡ ಈ ಸಂಸ್ಥೆಗಳನ್ನು ನಡೆಸುವ ಅಧಿಕಾರಸ್ಥರಲ್ಲಿ ಇದ್ದಂತಿಲ್ಲ.

ರಾಜ್ಯ ಸರ್ಕಾರದ ವೈಫಲ್ಯತೆಯ ಹಲವು ಉದಾಹರಣೆಗಳನ್ನು ಇಲ್ಲಿ ನೀಡಿದ್ದೇನೆ.

೨೦೦೯ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ೧೫ ಜಿಲ್ಲೆಗಳಲ್ಲಿ ಅತಿವೃಷ್ಟಿ. ಪ್ರವಾಹ ಪರಿಸ್ಥ್ಥಿತಿ ಉಂಟಾಗಿ ೨೨೯ ಜನ ಮೃತರಾಗಿ ೭೦೦ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿದವು. ೭ ಲಕ್ಷ ಮನೆಗಳು ನಾಶವಾಯಿತು. ೧೮ ಸಾವಿರ ಕೋಟಿ ರೂ ನಷ್ಟವಾಯಿತು. ಪರಿಸ್ಥ್ಥಿತಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ೧೯೧೭ ಕೋಟಿ ನೆರವು ನೀಡಿತು. ಸಾರ್ವಜನಿಕರಿಂದ ಉದಾರ ದೇಣಿಗೆಯ ರೂಪದಲ್ಲಿ ೪೧೬ ಕೋಟಿ ರೂಪಾಯಿ ಹರಿದು ಬಂತು ಎರಡು ವರ್ಷಗಳು ಉರುಳಿದರೂ ದಾನಿಗಳು ನಿರ್ಮಿಸಿದ ಮನೆಗಳು ಸೇರಿದಂತೆ ಒಟ್ಟು ನಿರ್ಮಾಣಗೊಂಡ ಮನೆಗಳ ಸಂಖ್ಯೆ ೩೦೦೦ ಮೀರಿಲ್ಲ. ಏಕೆಂದರೆ ಈ ಎಲ್ಲ ಹಣ ಮಾಯವಾದದ್ದು ಎಲ್ಲಿ?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ತನಕ ಒಂದೇ ಒಂದು ಯೂನಿಟ್ ವಿದ್ಯತ್‌ನ್ನು ಹೊಸದಾಗಿ ಉತ್ಪಾದಿಸಲಾಗಿಲ್ಲ. ಜಲ, ಉಷ್ಣ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಸ್ಥಾಪಿತ ಸಾಮರ್ಥ್ಯದ ೧೧,೨೦೦ ಮೆಗಾವ್ಯಾಟ್. ಇದರ ಅರ್ಧದಷ್ಟನ್ನೂ ಉತ್ಪಾದಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕೇಂದ್ರದ ಗ್ರಿಡ್‌ನಿಂದ ಬರುವ ಪುಕ್ಕಟ್ಟೆ ವಿದ್ಯುತ್ ಸೇರಿಸಿದರೂ ನಮ್ಮ ದೈನಂದಿನ ಬೇಡಿಕೆಯಾದ ೮೬೦೦ ಮೆ.ವ್ಯಾಟ್ ವಿದ್ಯುತ್ ದೊರಕುತ್ತಿಲ್ಲ. ಈ ಕೊರತೆ ನಿವಾರಣೆಗಾಗಿ ಶಾಶ್ವತ ಪರಿಹಾರ ಹುಡುಕುವ ಬದಲು ರಾಜ್ಯ ಸರ್ಕಾರ ಹಣ ಖರ್ಚು ಮಾಡಿ, ಬಹಿರಂಗ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿಸಲು ಹೊರಟಿದ್ದು, ಕಳೆದ ಮೂರು ವರ್ಷಗಳಲ್ಲಿ ಇದೊಂದೇ ಬಾಬಿಗಾಗಿ ಸರಿ ಸುಮಾರು ಆರು ಸಾವಿರ ಕೋಟಿ ಖರ್ಚುಮಾಡಿದೆ. ಪ್ರತಿ ದಿನ ೧೦೦೦ ಮೆಗಾವ್ಯಾಟ್ ವಿದ್ಯುತ್ ಕೊಳ್ಳಲಾಗುತ್ತಿದ್ದು ಈ ಪೈಕಿ, ವಿತರಣೆ ಹಾಗೂ ಪ್ರಸರಣದಲ್ಲಿ ಆಗುವ ಶೇ ೨೮ ರಷ್ಟು ನಷ್ಟವನ್ನು ಪರಿಗಣಿಸಿದರೆ ನಮಗೆ ಪ್ರತಿದಿನ ಸಿಗುತ್ತಿರುವ ವಿದ್ಯುತ್ ಕೇವಲ ೭೨೦ ಮೆ.ವ್ಯಾಟ್ ಮಾತ್ರ. ಹಲವು ಖಾಸಗಿ ಕಂಪನಿಗಳು ಈ ವಿದ್ಯುತ್‌ನ್ನು ಪೂರೈಸುತ್ತಿದ್ದು ದಾರಾಳ ಕಿಕ್ ಬ್ಯಾಕ್ ಸಲ್ಲಿಕೆಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿವೆ.

ತಾತ್ಕ್ಕಾಲಿಕವಾಗಿ ಹೀಗೆ ಹಣ ಖರ್ಚುಮಾಡಿ, ವಿದ್ಯುತ್ ಖರೀದಿಸುವ ಬದಲು ಇದೇ ಹಣವನ್ನು ವಿನಿಯೋಗಿಸಿ ನಿರ್ಮಾಣ ಹಂತದಲ್ಲಿರುವ ಹಲವು ವಿದ್ಯುತ್ ಯೋಜನೆಗಳನ್ನು ಪೂರ್ಣಗೊಳಿಸಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಬಹುದಾದ ಸುವರ್ಣಾವಕಾಶವನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ.

ರೈತರ ಪಂಪ್ ಸೆಟ್‌ಗಳಿಗೆ ದಿನವಿಡೀ ಉಚಿತವಾಗಿ ವಿದ್ಯುತ್ ನೀಡುತ್ತೇವೆ ಅಂತ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾಡಿದ್ದೇನು? ಅಕ್ರಮ ಸಂಪರ್ಕಗಳು ಎಂಬ ನೆಪದಲ್ಲಿ ೧೫ ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಕಿತ್ತು ಹಾಕಿದ್ದು ಇದೀಗ ೧೫ ತಿಂಗಳ ಅಕ್ರಮ ಬಳಕೆಯ ಶುಲ್ಕವನ್ನು ಭರಿಸಿದರೆ ಮಾತ್ರ ವಿದ್ಯುತ್ ಸಂಪರ್ಕಗಳನ್ನು ನೀಡಲಾಗುತ್ತಿದೆ. ಶುಲ್ಕಭರಿಸಿ ಸಂಪರ್ಕ ಪಡೆದರೂ, ನೀಡಲಾಗುತ್ತಿರುವ ವಿದ್ಯುತ್ ಅವಧಿ ದಿನಕ್ಕೆ ೩ ಘಂಟೆಗಳು ಮಾತ್ರ.

ಆರ್ಥಿಕ ಅವಾಂತರಗಳು ಇಲ್ಲಿಗೆ ನಿಂತಿಲ್ಲ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನಗಳಂತಹ ಬಡ ಜನರಿಗೆ ತಲುಪಬೇಕಾದ ಹಣ ತಿಂಗಳುಗಟ್ಟಲೆ ಬಾಕಿ ಉಳಿದಿವೆ. ಅನುದಾನಿತ ಶಾಲೆಗಳ ಉಪಾದ್ಯಾಯರಿಗೆ ಮೂರು ವರ್ಷಗಳಿಂದ ವೇತನ ಸಿಕ್ಕಿಲ್ಲ. ಲೋಕೋಪಯೋಗಿ ಇಲಾಖೆ ಒಂದರಲ್ಲೇ ೩೫೦೦ ಕೋಟಿ ರೂಪಾಯಿ ಮೊತ್ತದ ಬಿಲ್‌ಗಳು ಪಾವತಿಯಾಗದೆ ಉಳಿದಿವೆ. ಆಹಾರ, ವಿದ್ಯುಚ್ಛಕ್ತಿ, ಸಾರಿಗೆ, ಉದ್ದಿಮೆಗಳು ಕೃಷಿ ಮೇಲಿನ ಸಬ್ಸಿಡಿಗಾಗಿ ೬೨೪೨ ಕೋಟಿ ಕೊಡ್ತಾ ಇದ್ದೇವೆ ಎಂದು ಸರ್ಕಾರ ಜಾಹಿರಾತುಗಳಲ್ಲಿ ಹೇಳಿಕೊಳ್ಳುತ್ತಿದ್ದರೂ ಬಿಪಿಎಲ್ ಕಾರ‍್ಡುಗಳಿಗೆ ಆಹಾರ ಧಾನ್ಯ ನೀಡದೆ ಸಂಪೂರ್ಣ ನಿಂತಿದೆ. ಆಶ್ರಯ ಮನೆಗಳ ಗಂಗಾಕಲ್ಯಾಣ ಇತ್ಯಾದಿ ಯೋಜನೆಗಳ ಫಲಾನುಭವಿಗಳಿಗೆ ಸಾಲ ಮನ್ನಾ ಮಾಡ್ತೇವೆ ಅಂತ ಅಧಿಕಾರಕ್ಕೆ ಬರುವ ಮೊದಲು ಹೇಳಿದ ಬಿಜೆಪಿ ಈಗ ಸಾಲವನ್ನು ಒಂದೇ ಕಂತಿನಲ್ಲಿ ತೀರಿಸಿ, ಬಡ್ಡಿ ಮನ್ನಾ ಮಾಡುತ್ತೇವೆ ಅಂತ ಹೇಳ್ತಾ ಇದೆ.

ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುವುದೇ ಅನಗತ್ಯವೆನಿಸುತ್ತದೆ. ನೇಮಕಾತಿಯಲ್ಲಿ ಹಣತಿಂದ ಆರೋಪದ ಮೇಲೆ ಮಂತ್ರಿಯೊಬ್ಬರು ಮಾಜಿ ಆಗಿ ಮನೆ ಸೇರಿದರು, ಮತ್ತೊಬ್ಬ ಮಂತ್ರಿ ಜೈಲು ಕಂಡರು, ಸಾರ್ವಜನಿಕರಿಂದ ನಿವೇಶನ ನೀಡುವ ಭರವಸೆ ನೀಡಿ ೩೭ ಕೋಟಿ ರೂಪಾಯಿ ಕಬಳಿಸಿರುವ ಕ್ರಿಮಿನಲ್ ಆರೋಪ ಹೊತ್ತಿರುವ ವ್ಯಕ್ತಿಯನ್ನು ಮಂತ್ರಿ ಮಾಡಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ನಡೆದ ೨೪೦೦ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ, ೪೦೦ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ೮೦೦೦ ಪೊಲೀಸ್ ಕಾನ್‌ಸ್ಟೆಬಲ್‌ಗಳು, ಇವರುಗಳ ನೇಮಕಾತಿಯಲ್ಲಿ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ.

ಸಂಶಯಾತೀತವಾಗಿ ವರ್ತಿಸಬೇಕಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದರುಪಯೋಗದಂತಹ ಕಳಂಕಗಳು ಬಡಿದಿವೆ. ಅದರ ಮಾಜಿ ಅಧ್ಯಕ್ಷರೇ ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಂಗದ ಮೊರೆ ಹೋಗಿದ್ದಾರೆ. ಸತ್ಯಸಂಧ ಪ್ರಾಮಾಣಿಕ ಲೋಕಾಯುಕ್ತರ ಮೂಗಿನ ಕೆಳಗೆ ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಹಲವು ಅಧಿಕಾರಿಗಳನ್ನು ಅಲ್ಲಿಂದ ಕಿತ್ತುಹಾಕಲಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಒಂದು ಕಂಪನಿಯ ವಕ್ತಾರ ನೀಡಿದ ಲಂಚ ಪಡೆದ ೭೦೦ಕ್ಕೂ ಹೆಚ್ಚು ಅಧಿಕಾರಿಗಳ, ಪತ್ರಕರ್ತರ ಪಟ್ಟಿ ಪ್ರಕಟಗೊಂಡು ಹಲವಾರು ದಿನಗಳೇ ಉರುಳಿದರೂ, ಆರೋಪಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕೆಲಸ ಆರಂಭಿಸಲು ಸರ್ಕಾರಕ್ಕೆ ಯಾವುದೇ ಇಚ್ಚಾಶಕ್ತಿ ಇದ್ದಂತೆ ಕಾಣುತ್ತಿಲ್ಲ. ಜಗತ್ತಿಗೆ ಬುದ್ಧಿ ಹೇಳುವ ಬೃಹಸ್ಪತಿಗಳಾದ ಪತ್ರಕರ್ತರು ತಮ್ಮ ಮೇಲಿನ ಆರೋಪಗಳ ಬಗ್ಗೆ ಸಮಜಾಯಿಷಿ ನೀಡುವ ಕನಿಷ್ಠ ಸೌಜನ್ಯವನ್ನೂ ತೋರಿಸುತ್ತಿಲ್ಲ. ಇದೆಂತ ನೈತಿಕ ಅಧ:ಪತನ?

ಹೀಗೆ ಕುಸಿಯುತ್ತಿರುವ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಸದಾನಂದಗೌಡರು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದರೂ, ಅವರ ಸಂಪುಟದ ಸಹೋದ್ಯೋಗಿಗಳೇ ಅವರ ಮಾತನ್ನು ಕೇಳದ ಪರಿಸ್ಥಿತಿ ಉದ್ಭವಿಸಿದೆ. ಆಡಳಿತ ಪಕ್ಷದಲ್ಲಿ ಎರಡು ಬಣಗಳ ತಿಕ್ಕಾಟ ಆಡಳಿತದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಮಂತ್ರಿಗಳೆಷ್ಟೋ ಮಂದಿ ವಿಧಾನಸೌಧ ಕಛೇರಿಗೆ ಕಾಲಿರಿಸುವ ಕೃಪೆಯನ್ನೇ ತೋರಿಸುತ್ತಿಲ್ಲ.

ಮುಂದೆ ದಾರಿ ಕಾಣುವುದೆಂತೋ ಕಾದು ನೋಡಬೇಕು?

ಪುಟದ ಮೊದಲಿಗೆ
Votes: 6 Rating: 4